ತಲೆಯುಂಡಿಗೆ	-
	ಪ್ರಾಗಿತಿಹಾಸ ಕಾಲದಲ್ಲಿ ಯರೋಪಿನಲ್ಲಿ ವಿಶೇಷವಾಗಿ ಈಗಿನ ಫ್ರಾನ್ಸ್ ಪ್ರದೇಶದಲ್ಲಿ ಇದ್ದ ಒಂದು ಪದ್ಧತಿ (ಟ್ರಿಪ್ಯಾನಿಂಗ್; ಟ್ರಿಫೈನಿಂಗ್). ಇದು ನೂತನ ಶಿಲಾಯುಗ ಮತ್ತು ಬೃಹತ್ ಶಿಲಾಯುಗಗಳಲ್ಲಿತ್ತು. ಸಾಮಾನ್ಯವಾಗಿ ಮನುಷ್ಯ ಜೀವಂತವಿರುವಾಗಲೇ ಅವನ ತಲೆಬುರುಡೆಯನ್ನು ಕೊರೆದು ಒಂದು ಚೂರನ್ನು ತೆಗೆದು ಬಳಿಕ ಗಾಯವನ್ನು ನಾರಿನಿಂದ ಹೊಲಿಯುತ್ತಿದ್ದರು. ತಲೆಯುಂಡಿಗೆ ತೆಗೆಯುವುದು ಮಾಟಕ್ಕೆ ಸಾಧನವೆಂದು ಜನರ ನಂಬಿಕೆಯಾಗಿತ್ತು. ಮನುಷ್ಯನಲ್ಲಿದ್ದ ದುಷ್ಟಶಕ್ತಿ ಈ ರಂಧ್ರದ ಮೂಲಕ ಹೊರಟುಹೋಗುವುದೆಂದು ನಂಬಲಾಗಿತ್ತು. ಬುರುಡೆಯಿಂದ ತೆಗೆದ ಚೂರನ್ನು ಕೈಗೋ ಅಥವಾ ಕೊರಳಿಗೋ ತೂಗುಹಾಕಿಕೊಳ್ಳುತ್ತಿದ್ದರು. ಅನೇಕ ವೇಳೆ ಈ ಶಸ್ತ್ರಕ್ರಿಯೆಯಿಂದ ಜೀವವೇ ಹೊರಟುಹೋಗುತ್ತಿತ್ತು. ಮನುಷ್ಯ ಸತ್ತ ಅನಂತರವೇ ಅವನ ತಲೆಬುರುಡೆಯಲ್ಲಿ ಉಂಡಿಗೆ ಕೊರೆಯುತ್ತಿದ್ದದ್ದೂ ಉಂಟು. 

	ಕೆಲವು ವೇಳೆ ಖಿ ಅಕ್ಷರದ ಆಕಾರದಲ್ಲಿ ಉಂಡಿಗೆ ತೆಗೆಯುತ್ತಿದ್ದದ್ದೂ ಉಂಟು. ಹೆಂಗಸಿನ ತಲೆಬುರುಡೆಯಲ್ಲಿ ಮಾತ್ರ ಈ ರೀತಿ ಉಂಡಿಗೆ ತೆಗೆಯುತ್ತಿದ್ದರು. ಮಧ್ಯ ಫ್ರಾನ್‍ನ್ಸಲ್ಲಿ ಇದಕ್ಕೆ ಆಧಾರ ಸಿಕ್ಕಿದೆ. 

	ತಲೆಯುಂಡಿಗೆ ಕೊರೆಯುವ ಪದ್ಧತಿಯನ್ನನುಸರಿಸುತ್ತಿದ್ದವರು ಬೀಕರ್ ಜನ. ಇವರು ಕಂಚಿನ ಯುಗಕ್ಕೆ ಹಿಂದೆ ಇದ್ದರು. ಗಂಟೆಯಾಕಾರದ ಮಣ್ಣಿನ ಪಾತ್ರೆಗಳು ಇವರ ಸಂಸ್ಕøತಿಯ ಮುಖ್ಯ ಲಕ್ಷಣ. ಇವರು ಸ್ಪೇನಿನಲ್ಲಿದ್ದು ಬಳಿಕ ಮಧ್ಯ ಯೂರೋಪಿನಲ್ಲಿ ಹರಡಿದರು. ಪ್ಯಾರಿಸ್ ಸುತ್ತಮುತ್ತಲಿನ ಪ್ರಾಗೈತಿಹಾಸಿಕ ಜನರು ಸತ್ತವರ ತಲೆಬುರುಡೆಗಳಿಂದ ಚಕ್ರಾಕಾರದಲ್ಲಿ ಚೂರನ್ನು ತೆಗೆಯುತ್ತಿದ್ದರು. ಇಂಥ ಚೂರುಗಳು ಕೆಲವು ಸಾಧನೆಗಳಿಗೆ ಸಹಾಯಕವೆಂಬ ನಂಬಿಕೆ ಇವರಲ್ಲಿತ್ತು. ತಲೆಬುರುಡೆಗಳ ಉಂಡಿಗೆ ಕೊರೆಯಲು ಚಕಮುಕಿ ಕಲ್ಲಿನಿಂದ ಮಾಡಿದ ಚೂರಿಗಳನ್ನು ಉಪಯೋಗಿಸುತ್ತಿದ್ದರು. 

	ಗ್ರೀಸಿನ ಮೈಸಿನೇ, ಮಧ್ಯ ಜರ್ಮನಿಯ ಅಲ್ಸೇಸ್, ಫ್ರಾನ್ಸ್, ಬೊಹೀಮಿಯ ಮುಂತಾದ ಪ್ರದೇಶಗಳಲ್ಲಿ ತಲೆಯುಂಡಿಗೆ ಕೊರೆಯುವುದು ರೂಢಿಯಲ್ಲಿತ್ತು. ಬೊಹೀಮಿಯದಲ್ಲಿ ಬೃಹತ್ ಶಿಲಾಯುಗದ ಜನರಲ್ಲಿ ಈ ಪದ್ಧತಿಯಿತ್ತು. ದಕ್ಷಿಣ ಫ್ರಾನ್ಸಿನ ಸೇವೆನ್ನಿನ ಗುಹೆಗಳಲ್ಲಿ ಇಂಥ 105 ತಲೆಬುರುಡೆಗಳೂ ಅಲ್ಲಿಯ ಬೃಹತ್ ಶಿಲಾಗೋರಿಗಳಲ್ಲಿ 52 ತಲೆಬುರುಡೆಗಳೂ ಸಿಕ್ಕಿದವು. ಅವೆಲ್ಲವೂ ಆ ತಲೆಬುರುಡೆಗಳ ಮನುಷ್ಯರು ಜೀವಂತವಿರುವಾಗಲೇ ಕೊರೆದವೆಂದು ಹೇಳಲಾಗಿದೆ. ತಲೆಯುಂಡಿಗೆ ಕೊರೆದು ತೆಗೆದ ಚಕ್ರಾಕಾರದ ಚೂರುಗಳು ಅಥವಾ ಕಾಪುಗಳು ಸ್ವಿಟ್‍ಜರ್ಲೆಂಡಿನ ಕಾರ್ಟೈಲಾಡ್ ಎಂಬಲ್ಲಿ ಹೆಚ್ಚಾಗಿ ಸಿಕ್ಕಿವೆ. 

	ಭಾರತದಲ್ಲಿ ಕಾಶ್ಮೀರದ ಬುರ್ಜಹೋಂ ಎಂಬ ನೂತನ ಶಿಲಾಯುಗ ನೆಲೆಯಲ್ಲಿ ಇಂಥ ಒಂದು ಬುರುಡೆ ಸಿಕ್ಕಿದೆ. ಇದೂ ಆ ಮನುಷ್ಯ ಜೀವಂತವಾಗಿದ್ದಾಗಲೇ ಕೊರೆದದ್ದು ಎಂದು ಹೇಳಲಾಗಿದೆ. 			(ಕೆ.ಕೆ.ಎಸ್ ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ